ನಾಗಾಸಾಕೀ
ಜಪಾನಿನ ಕೀಯೂಷೂ ದ್ವೀಪದಲ್ಲಿರುವ ಒಂದು ಪ್ರಾಂತ್ಯ; ಅದರ ಆಡಳಿತ ಕೇಂದ್ರ. ಅತ್ಯಂತ ದೊಡ್ಡ ನಗರ. ಪ್ರಾಂತ್ಯದ ವಿಸ್ತೀರ್ಣ 4,040 ಕಿ.ಮೀ. ಜನಸಂಖ್ಯೆ 15,70,245 (1970). ನಾಗಸಾಕೀ ನಗರ ಕೀಯೂಷೂ ದ್ವೀಪದ ವಾಯವ್ಯ ಭಾಗದಲ್ಲಿರುವ ಹಿeóÉನ್ ಪರ್ಯಾಯ ದ್ವೀಪದ ಪಶ್ಚಿಮ ತುದಿಯಲ್ಲಿದೆ. ಜನಸಂಖ್ಯೆ 4,21,114(1970). ಇದು ಭೂಶಿರದ ಮೇಲಿರುವುದರಿಂದ ಒಳ್ಳೆಯ ಬಂದರಾಗಿದೆ. ಜಗತ್ತಿನ ಅತ್ಯಂತ ಸುಂದರ ಹಾಗೂ ನೈಸರ್ಗಿಕ ಬಂದರುಗಳಲ್ಲಿ ಒಂದಾದ ಇದು ಸುಮಾರು 1.2 ಕಿ.ಮೀ ಅಗಲ ಮತ್ತು 4.8 ಕಿ.ಮೀ ಉದ್ದವಾಗಿದ್ದು ಚಿಕ್ಕ ಚಿಕ್ಕ ದ್ವೀಪಗಳಿಂದ ರಕ್ಷಣೆ ಪಡೆದಿದೆ. ನಾಗಸಾಕೀ ಪಟ್ಟಣ ಅರ್ಧಚಂದ್ರಾಕೃತಿಯ ನಾಟಕಶಾಲೆಯಂತಿದೆ.
1571ರಲ್ಲಿ ಪೋರ್ಚುಗೀಸರು ಈ ಸ್ಥಳಕ್ಕೆ ಮೊತ್ತಮೊದಲಿಗೆ ವ್ಯಾಪಾರಕ್ಕಾಗಿ ಬಂದರು. 1636ರ ನಂತರ ಜಪಾನು ಎಲ್ಲ ವಿದೇಶಿಯರನ್ನೂ ದೇಶದಿಂದ ಹೊರಗೆ ಅಟ್ಟಿತಾದರೂ ಈಗ ನಾಗಸಾಕೀಯ ಒಂದು ಭಾಗವಾಗಿರುವ ದೇಶೀಮ ಎಂಬ ಚಿಕ್ಕ ದ್ವೀಪದಲ್ಲಿ ಡಚ್ಚರಿಗೆ ಇರಲು ಅವಕಾಶ ನೀಡಿತ್ತು. ಇಲ್ಲಿಂದಲೇ ಜಪಾನಿ ಅಧಿಕಾರಿಗಳಿಗೆ ಬಾಹ್ಯ ಜಗತ್ತಿನ ಆಗುಹೋಗುಗಳು ತಿಳಿಯುತ್ತಿದ್ದವು. ವಿದ್ಯಾರ್ಥಿಗಳು ಡಚ್ ಭಾಷೆಯನ್ನು ಕಲಿಯಲು, ವಿದೇಶಿ ವಿಜ್ಞಾನ ಮತ್ತು ಸಂಸ್ಕøತಿಯನ್ನು ಅರಿಯಲು ಇಲ್ಲಿಗೆ ಬರುತ್ತಿದ್ದರು. 1854ರ ಒಪ್ಪಂದದ ಪ್ರಕಾರ ಅಮೆರಿಕ ಸಂಯುಕ್ತ ಸಂಸ್ಥಾನ ವ್ಯಾಪಾರಕ್ಕಾಗಿ ಈ ಬಂದರಿನಲ್ಲಿ ಪ್ರವೇಶ ಪಡೆಯಿತು. ಸ್ವಲ್ಪ ಕಾಲದ ಅನಂತರ ಇತರ ಪಾಶ್ಚಾತ್ಯ ದೇಶಗಳ ಜನರೂ ವ್ಯಾಪಾರಕ್ಕಾಗಿ ಇಲ್ಲಿಗೆ ಬರಲಾರಂಭಿಸಿದರು. 19ನೇ ಶತಮಾನದ ಉತ್ತರಾರ್ಧದಲ್ಲಿ ಹಡಗುಗಳು ಕಲ್ಲಿದ್ದಲನ್ನು ತುಂಬಿಕೊಳ್ಳುವ ಪ್ರಮುಖ ಏಷ್ಯನ್ ಬಂದರುಗಳಲ್ಲಿ ಇದೂ ಒಂದಾಯಿತು. ಹತ್ತಿರವೇ ವಿಪುಲವಾಗಿ ಕಲ್ಲಿದ್ದಲು ದೊರೆಯುತ್ತಿದ್ದುದು ಕಾರಣ. 1903ಕ್ಕೆ ಮೊದಲು ಇದು ರಷ್ಯದ ಏಷ್ಯಭಾಗದ ಹಡಗು ಪಡೆಗೆ ಚಳಿಗಾಲದ ಬಂದರಾಗಿತ್ತು. 

ನಾಗಸಾಕಿಯ ಜನಸಂಖ್ಯೆ 1930ರಿಂದ ಬೆಳೆಯತೊಡಗಿತು. 1940ರಲ್ಲಿ ಇದು 2,53,000ಕ್ಕೆ ಏರಿತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಇಲ್ಲಿ ಹಡಗುಗಳ ನಿರ್ಮಾಣ ಮತ್ತು ಯುದ್ಧಾಸ್ತ್ರಗಳ ತಯಾರಿಕೆ ಆಗುತ್ತಿದ್ದವು. 1945ರ ಆಗಸ್ಟ್ 9ರಂದು ನಾಗಸಾಕಿ ಮೇಲೆ ಅಮೆರಿಕ ಎರಡನೆಯ ಪರಮಾಣು ಬಾಂಬನ್ನು ಪ್ರಯೋಗಿಸಿತು. ಮಿತ್ಸುಬಿಷಿ ಸಂಸ್ಥೆಗೆ ಸೇರಿದ, ಯುದ್ಧೋಪಕರಣಗಳನ್ನು ತಯಾರಿಸುತ್ತಿದ್ದ ಎರಡು ಕಾರ್ಖಾನೆಗಳ ನಡುವಿನ ಕಣಿವೆಯ 3.8 ಚ.ಕಿ.ಮೀ.ಗಳಷ್ಟು ನಗರ ಭಾಗ ಸಂಪೂರ್ಣ ನೆಲ ಸಮವಾಯಿತು. ಸುಮಾರು 40 ಸಾವಿರ ಜನ ಸತ್ತರು. ಸುಮಾರು 30,000 ಜನ ಗಾಯಗೊಂಡರು. ಬಂದರಿಗೂ 3.2 ಕಿ.ಮೀ ದೂರದಲ್ಲಿದ್ದ ವ್ಯಾಪಾರ ಕ್ಷೇತ್ರಕ್ಕೂ ಗುಡ್ಡಗಳು ಸುತ್ತುವರಿದಿದ್ದ ಜನನಿಬಿಡ ಪ್ರದೇಶಗಳಿಗೂ ಅಷ್ಟು ಅಪಾಯವಾಗಲಿಲ್ಲ. ಪರಮಾಣು ಬಾಂಬು ಬಿದ್ದ ಸ್ಥಳದಲ್ಲಿ ಈಗ 15.24 ಮೀ. ಎತ್ತರದ ಸ್ತಂಭವೊಂದನ್ನು ಸ್ಮಾರಕವಾಗಿ ನಿಲ್ಲಿಸಲಾಗಿದೆ. ನೆಲಸಮವಾದ ನಗರಭಾಗದಲ್ಲಿ ಒಂದು ಆಟದ ಮೈದಾನದ ಸುತ್ತ 4000 ಮನೆಗಳು ಎದ್ದಿವೆ. ಹಡಗುಕಟ್ಟೆಯ ಕ್ಷೇತ್ರದಲ್ಲಿ ಹಡಗುಗಳನ್ನು ಕಟ್ಟುವ ಕೆಲಸ ಮತ್ತೆ ಭರದಿಂದ ಸಾಗುತ್ತಿದೆ.

ಹಡಗು ನಿರ್ಮಾಣವೇ ಅಲ್ಲದೇ ಯಂತ್ರೋಪಕರಣ ತಯಾರಿಕೆ, ಮೀನುಗಳ ಮತ್ತು ಹಣ್ಣುಗಳ ಡಬ್ಬೀಕರಣ, ಆಮೆಗಳ ಕರಟದಿಂದ ಸರಕು ತಯಾರಿಕೆ- ಇವು ಇಲ್ಲಿಯ ಕೈಗಾರಿಕೆಗಳು.		
				(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ